ಮೊಳಕಾಲ್ಮುರು
ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಅದರ ಮುಖ್ಯ ಪಟ್ಟಣ. ಚಿತ್ರದುರ್ಗ ಉಪವಿಭಾಗಕ್ಕೆ ಸೇರಿದ್ದು ಜಿಲ್ಲೆಯ ಈಶಾನ್ಯದಿಕ್ಕಿನಲ್ಲಿದೆ. ಈ ತಾಲ್ಲೂಕನ್ನು ದಕ್ಷಿಣದಲ್ಲಿ ಚಳ್ಳಕೆರೆ ತಾಲ್ಲೂಕು, ಉತ್ತರ ಮತ್ತು ಪೂರ್ವದಲ್ಲಿ ಆಂಧ್ರಪ್ರದೇಶ, ವಾಯವ್ಯ ಮತ್ತು ಪಶ್ಚಿಮದಲ್ಲಿ ಬಳ್ಳಾರಿ ಜಿಲ್ಲೆ ಸುತ್ತುವರಿದಿವೆ. ಈ ತಾಲ್ಲೂಕಿನಲ್ಲಿ ದೇವಸಮುದ್ರ ಮತ್ತು ಮೊಳಕಾಲ್ಮುರು ಹೋಬಳಿಗಳೂ ಒಂದು ಪಟ್ಟಣವೂ 91 ಗ್ರಾಮಗಳೂ ಇವೆ. ವಿಸ್ತೀರ್ಣ 736.2 ಚ.ಕಿ.ಮೀ. ಜನಸಂಖ್ಯೆ 1,26,648 (2001).

	ತಾಲ್ಲೂಕು ಹೆಚ್ಚಿನ ಮಟ್ಟಿಗೆ ಕಣಶಿಲೆಯ ಬೆಟ್ಟಗುಡ್ಡಗಳ ಪ್ರದೇಶ. ಮಧ್ಯೆ ಮಧ್ಯೆ ಇರುವ ಕಣಿವೆ ಪ್ರದೇಶಗಳು ಸುಮಾರು ಮಟ್ಟಸವಾಗಿದ್ದು ಜನವಸತಿಗೆ ಯೋಗ್ಯವಾಗಿವೆ. ಪೂರ್ವಘಟ್ಟ ಶ್ರೇಣಿಗೆ ಸೇರಿದ ಒಂದು ಚಾಚು ಇಲ್ಲಿ ಹಬ್ಬಿದೆ. ಸುತ್ತಮುತ್ತ ಹರಡಿರುವ ಬೆಟ್ಟಗುಡ್ಡಗಳಲ್ಲಿ ಬ್ರಹ್ಮಗಿರಿ (706 ಮೀ), ನುಂಕಪ್ಪನ ಗುಡ್ಡ (ನುಂಕೆ ಭೈರವ, 921 ಮೀ). ಜಟಿಂಗ ರಾಮೇಶ್ವರ ಬೆಟ್ಟ (1,057 ಮೀ) ಮತ್ತು ಶಾಂತಿಗುಡ್ಡ (790 ಮೀ) ಮುಖ್ಯವಾದವು.

	ಇಲ್ಲಿಯ ಮುಖ್ಯನದಿ ಜನಗಹಳ್ಳ, ಇದನ್ನು ಚಿನ್ನಹಗರಿ ಎಂದೂ ಕರೆಯುತ್ತಾರೆ. ಚಿತ್ರದುರ್ಗ ಮತ್ತು ಜಗಳೂರು ತಾಲ್ಲೂಕುಗಳ ಮುಖಾಂತರ ಹರಿದುಬರುವ ಈ ನದಿ ಮೊಳಕಾಲ್ಮುರು ತಾಲ್ಲೂಕು ಮತ್ತು ಬಳ್ಳಾರಿ ಜಿಲ್ಲೆಯ ಎಲ್ಲೆಯಾಗಿ ಸ್ವಲ್ಪ ದೂರ ಹರಿದು ತಾಲ್ಲೂಕಿನ ಮಧ್ಯಭಾಗದಲ್ಲಿ ಪ್ರವೇಶಿಸಿ ಈಶಾನ್ಯಾಭಿಮುಖವಾಗಿ ಹರಿದು ಮುಂದೆ ವೇದಾವತಿಯನ್ನು ಕೂಡಿಕೊಳ್ಳುವುದು. ಈ ನದಿಗೆ ಕೆಲವು ಹಳ್ಳಗಳು ಬಂದು ಸೇರುವುದುಂಟು.

	ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 526.39 ಮಿಮೀ. ವ್ಯವಸಾಯಕ್ಕೆ ಅನುಕೂಲವಾಗಿ ಅನೇಕ ಕೆರೆ ಬಾವಿಗಳೂ ಇವೆ.  ತಲಪರಿಗೆಗಳೂ ಬಹು ಸಂಖ್ಯೆಯಲ್ಲಿದ್ದು ಉಪಯುಕ್ತವಾಗಿವೆ. ಜೋಳ, ರಾಗಿ, ಬತ್ತ, ತೊಗರಿ, ಗೋದಿ, ಎಣ್ಣೆಬೀಜಗಳು, ಕಬ್ಬು, ಸೇಂಗಾ, ಹೊಗೆಸೊಪ್ಪು ಮತ್ತು ಹತ್ತಿ ಬೆಳೆಸುತ್ತಾರೆ.

	ತಾಲ್ಲೂಕಿನಲ್ಲಿ ದಕ್ಷಿಣೋತ್ತರವಾಗಿ ಹಬ್ಬಿರುವ ಚಿತ್ರದುರ್ಗ-ಬಳ್ಳಾರಿ ರಸ್ತೆ, ಮೊಳಕಾಲ್ಮುರು-ಕೂಡ್ಲಿಗಿ, ಕೂಡ್ಲಿಗಿ-ದೇವಸಮುದ್ರ, ಮೊಳಕಾಲ್ಮುರು-ರಾಯದುರ್ಗ ಈ ಹಾದಿಗಳು ತಾಲ್ಲೂಕಿನ ಮುಖ್ಯ ಸಂಪರ್ಕ ಮಾರ್ಗಗಳು. ತಾಲ್ಲೂಕಿನಲ್ಲಿ ಅಂಚೆ, ತಂತಿ, ದೂರವಾಣಿ, ವಿದ್ಯುತ್ ಮತ್ತು ವೈದ್ಯಕೀಯ ಸೌಕರ್ಯಗಳಿವೆ. ಪ್ರಾಥಮಿಕ ಶಾಲೆಗಳು, ಉನ್ನತ ಪ್ರೌಢಶಾಲೆಗಳು ಇವೆ. ಈ ತಾಲ್ಲೂಕಿನಲ್ಲಿ ತಯಾರಾಗುವ ಕೈಮಗ್ಗದ ರೇಷ್ಮೆಬಟ್ಟೆಗಳು ಪ್ರಸಿದ್ಧವಾದವು.

	ಕೊಂಡಲಹಳ್ಳಿ, ಕೋನಸಾಗರ, ನಾಗಸಮುದ್ರ, ಬೊಮ್ಮಗೊಂಡನಕೆರೆ, ಹಿರೇಕೆರೆಹಳ್ಳಿ, ದೇವಸಮುದ್ರ ಮತ್ತು ರಾಯಪುರ ಕೆಲವು ಮುಖ್ಯ ಗ್ರಾಮಗಳು. ಬ್ರಹ್ಮಗಿರಿ, ಜಟಿಂಗ, ರಾಮೇಶ್ವರ ಮತ್ತು ಸಿದ್ಧಾಪುರಗಳಲ್ಲಿ ಅಶೋಕನ ಶಾಸನಗಳು ದೊರಕಿವೆ. ಅಲ್ಲದೆ ಇವುಗಳ ಬಳಿಯಲ್ಲಿ ಇಸಿಲ ಎಂಬ ಬಹು ಪ್ರಾಚೀನ ಪಟ್ಟಣವೂ ಇತ್ತು. ನುಂಕೆಭೈರವ ಬೆಟ್ಟದಲ್ಲಿ ಪ್ರತಿ ವೈಶಾಖದಲ್ಲಿ ಜಾತ್ರೆ ನಡೆಯುತ್ತದೆ. ಬೊಮ್ಮಘಟ್ಟದ ರಾಮದೇವರ ಜಾತ್ರೆಯೂ ಈ ಸುತ್ತಿನಲ್ಲಿ ಪ್ರಸಿದ್ಧ. 
											(ಕೆ.ಆರ್.ಆರ್.) 
      	ಮೊಳಕಾಲ್ಮುರು ಪಟ್ಟಣ ಈ ತಾಲ್ಲೂಕಿನ ಹಾಗೂ ಹೋಬಳಿಯ ಆಡಳಿತ ಕೇಂದ್ರ. ಬೆಂಗಳೂರು-ರಾಯದುರ್ಗ ಮಾರ್ಗದಲ್ಲಿ ಬಳ್ಳಾರಿಗೆ ದಕ್ಷಿಣಕ್ಕೆ 62 ಕಿಮೀ ದೂರದಲ್ಲೂ ಚಿತ್ರದುರ್ಗದ ಈಶಾನ್ಯಕ್ಕೆ 84 ಕಿಮೀ ದೂರದಲ್ಲೂ ಇದೆ. ಜನಸಂಖ್ಯೆ 14,131 (2001). ಊರಿನ ಸುತ್ತಮುತ್ತಲೂ ಬೆಟ್ಟಗುಡ್ಡಗಳಿದ್ದು, ಉತ್ತರಕ್ಕೆ ವಿಶಾಲವಾದ ಒಂದು ಕೆರೆ ಇದೆ. ಇದನ್ನು ನಾಯಕನಹಟ್ಟಿಯ ನಾಯಕನೊಬ್ಬ ತನ್ನ ತಾಯಿಯ ಹೆಸರಿನಲ್ಲಿ ಕಟ್ಟಿಸಿದ್ದಾನೆ. ಪಟ್ಟಣದಲ್ಲಿ ಅಂಚೆ, ತಂತಿ, ವಿದ್ಯುತ್ ಮುಂತಾದ ಸೌಕರ್ಯಗಳೂ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ಮತ್ತು ವೈದ್ಯಕೀಯ ಸೌಲಭ್ಯಗಳೂ ಇವೆ. ಮೊಳಕಾಲ್ಮುರು ಸುತ್ತಲ ನಗರಗಳಿಗೆ ಉತ್ತಮ ರಸ್ತೆಗಳಿಂದ ಸಂಪರ್ಕ ಹೊಂದಿದ್ದು ವ್ಯಾಪಾರ ಕೇಂದ್ರವಾಗಿ ಬೆಳೆಯುತ್ತಿದೆ. ಪಟ್ಟಣ ಪೌರಸಭಾಡಳಿತಕ್ಕೆ ಒಳಪಟ್ಟಿದೆ.

	ಹತ್ತನೆಯ ಶತಮಾನದಲ್ಲಿ ಈ ಪ್ರದೇಶ ನೊಳಂಬವಾಡಿ 32,000 ಸೀಮೆಯಲ್ಲಿ ಸಮಾವೇಶಗೊಂಡಿತ್ತು. ಕಲ್ಯಾಣದ ಚಾಳುಕ್ಯರ ಆರನೆಯ ವಿಕ್ರಮಾದಿತ್ಯನ ಸಹೋದರ ಜಯಸಿಂಹನ ಅನಂತರ ಹೊಯ್ಸಳ ಮತ್ತು ವಿಜಯನಗರ ದೊರೆಗಳ ಅಧಿಕಾರಕ್ಕೆ ಒಳಪಟ್ಟಿದ್ದ ಈ ಊರು ಹದಿನೈದನೆಯ ಶತಮಾನದಲ್ಲಿ ರಾಯದುರ್ಗದ ನಾಯಕರ ವಶದಲ್ಲಿತ್ತು. ಬೆಪ್ಪಬೊಮ್ಮನಾಯಕನೆಂಬವನು ನಾಯಕನಹಟ್ಟಿಯ ಮಲ್ಲಪ್ಪನಾಯಕನೆಂಬುವನಿಗೆ ಅವನ ಬಳಿ ಇದ್ದ ಶ್ರೇಷ್ಠವಾದ ಬಿಳಿ ಹಸುಗಳ ಬದಲು ಇದನ್ನು ಕೊಟ್ಟನೆಂದು ಒಂದು ಕಥೆ ಇದೆ. ಮುಂದೆ ಇದನ್ನು ಹೈದರ್ ಗೆದ್ದು ಮೈಸೂರಿಗೆ ಸೇರಿಸುವ ತನಕ ಈ ಊರು ಚಿತ್ರದುರ್ಗದ ಪಾಳೆಯಗಾರರ ಅಧೀನದಲ್ಲಿತ್ತು.

	ಮೊಳಕಾಲ್ಮುರು ಕೆರೆಯ ಬಳಿ ಒಂದು ಪ್ರತಿಧ್ವನಿ ಕೊಡುವ `ಕೂಗುಬಂಡೆ ಇದೆ. ಇದರ ಸಮೀಪದ ಕಲ್ಲಮೇಲೆ ಮಹಾಕವಿ ಕಾಳಿದಾಸನನ್ನು ಹೊಗಳುವ ಒಂದು ಯಮಕ ಶ್ಲೋಕವನ್ನು ಕೆತ್ತಲಾಗಿದೆ. ಈ ಸಂಸ್ಕøತ ಶ್ಲೋಕದಲ್ಲಿ ಕಾಳಿದಾಸನನ್ನು ಕವಿಶ್ರೇಷ್ಠನೆಂದು ಕರೆದು `ಶತ್ರುಗಳಿಗೂ ಕೂಡ ನೀನು ಹೃದಯಸ್ಪರ್ಶಿ ಕಾವ್ಯದಿಂದ ಸುಖ, ಸಂಪತ್ತುಗಳನ್ನು ಕೊಡುತಿರುವೆ ಎಂದು ಅಜ್ಞಾತ ಕವಿ ಇಲ್ಲಿ ಉದ್ಗಾರ ತೆಗೆದಿದ್ದಾನೆ. ಯಮಕ ಬಂಡೆಯ ವಾಯವ್ಯಕ್ಕೆ ನುಂಕೆಭೈರವನ ಬೆಟ್ಟವಿದೆ. ಇದು ಕಡಿದಾಗಿದ್ದು ಉತ್ತರದ ಗೋಸಾಯಿಗಳ ಪವಿತ್ರ ಯಾತ್ರಾಸ್ಥಳವಾಗಿದೆ. ಹತ್ತನೆಯ ಶತಮಾನದಲ್ಲಿ ಒಬ್ಬ ಕದಂಬ ದೊರೆ ನುಂಕೇಶ್ವರನ ಹೆಸರಿನಲ್ಲಿ ಕಟ್ಟಿಸಿದ ದೇವಾಲಯ ಇದೆಂದು ಹೇಳಲಾಗಿದೆ. ಈ ಕಾಲದಲ್ಲೇ ಲುಂಕೆಯ ಹೆಸರಿನ ಕೋಟೆಯನ್ನು ನಿರ್ಮಿಸಿದರು. ಅದೇ ಕಾಲಾನಂತರ ನುಂಕೆ ಕೋಟೆಯಾಯಿತು.                                              		
 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ